1775-1864. ಇಂಗ್ಲಿಷ್ ಕವಿ ಮತ್ತು ಗದ್ಯ ಬರೆಹಗಾರ. ಡಾಕ್ಟರನ ಮಗ. ಆಕ್ಸ್‍ಫರ್ಡ್‍ನ ವಿದ್ಯಾರ್ಥಿ, ಅಲ್ಲಿಂದ ಹೊರದೂಡಲ್ಪಟ್ಟ. ಆತುರಬುದ್ಧಿ, ಶೀಘ್ರಕೋಪಗಳ ಫಲವಾಗಿ ಈತನ ಜೀವನ ಹಲವು ಕಲಹಗಳಿಂದ ಕಹಿಯಾಯಿತು. ಸ್ಪೇನ್, ಇಟಲಿ ಮೊದಲಾದ ಹಲವು ದೇಶಗಳನ್ನು ಸಂದರ್ಶಿಸಿದ. ಈತನ ಪ್ರಸಿದ್ಧ ಕೃತಿ ‘ಇಮ್ಯಾಜಿನರಿ ಕಾನ್‍ವರ್‍ಸೇಷನ್ಸ್’. ಇದರ ಮೊದಲ ಎರಡು ಸಂಪುಟಗಳು 1824ರಲ್ಲೂ ಮೂರನೆಯದು 1828ರಲ್ಲೂ ಕೊನೆಯ ಎರಡು 1829ರಲ್ಲೂ ಪ್ರಕಟವಾದವು. ದಿ ಎಕ್ಸಾಮಿನೇಷನ್ ಆಫ್ ಷೇಕ್ಸ್‍ಪಿಯರ್ ಟಚಿಂಗ್ ಡೀರ್ ಸ್ಟೀಲಿಂಗ್ (1834), ಪೆರಿಕ್ಲೀಸ್ ಅ್ಯಂಡ್ ಆ್ಯಸ್‍ಪೇಸಿಯ (1836) ಮೊದಲಾದವು ಈತನ ಇತರ ಕೃತಿಗಳು. ಪ್ರಾಚೀನ ಸಾಹಿತ್ಯದ ಶ್ರದ್ಧಾವಂತ ವಿದ್ಯಾರ್ಥಿ. ಇವನ ಗದ್ಯಶೈಲಿಯ ಒಪ್ಪ, ಸಂಯಮಗಳು ಗ್ರೀಕ್ ಸಾಹಿತ್ಯವನ್ನು ನೆನಪಿಗೆ ತರುತ್ತವೆ. ಈತ ಜನಪ್ರಿಯತೆ ಗಳಿಸದಿದ್ದರೂ ವಿವೇಚನಾವಂತ ವಾಚಕರನ್ನು ಪಡೆದಿದ್ದ. 1853ರಲ್ಲಿ ಇಮ್ಯಾಜಿನರಿ ಕಾನ್‍ವರ್‍ಸೇಷನ್ಸ್ ಆಫ್ ಗ್ರೀಕ್ಸ್ ಅ್ಯಂಡ್ ರೋಮನ್ಸ್ ಪ್ರಕಟವಾಯಿತು. ಪ್ರಾಚೀನ ಕಾಲದಿಂದ ಲ್ಯಾಂಡರ್‍ನ ಕಾಲದವರೆಗಿನ ವ್ಯಕ್ತಿಗಳ ನಡುವಣ ಕಾಲ್ಪನಿಕ ಸಂಭಾಷಣೆಗಳು ಇವು. ಕೆಲವು ನಾಟಕೀಯವಾಗಿವೆ, ಕೆಲವು ವ್ಯಂಗ್ಯದಿಂದ ಕೂಡಿವೆ. ಈ ಸಂಭಾಷಣೆಗಳಲ್ಲಿ ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳ ವಿಮರ್ಶೆಯಿದೆ. ಇಲ್ಲಿ ಒಟ್ಟು 150 ಸಂಭಾಷಣೆ ಗಳಿವೆ. ಲ್ಯಾಂಡರ್ ಒಮೊಮ್ಮೆ ಪಾತ್ರಗಳನ್ನು ತನ್ನ ವೈಯಕ್ತಿಕ ಅಭಿಪ್ರಾಯಗಳ ಪ್ರತಿಪಾದನೆಗೆ ಬಳಸಿಕೊಳ್ಳುವುದರಿಂದ ಕೃತಿಯ ಸ್ವಾರಸ್ಯ ಕುಂದುತ್ತದೆ. ಒಮೊಮ್ಮೆ ವೈವಿಧ್ಯರಾಹಿತ್ಯದ ದೋಷವೂ ತಲೆದೋರುವುದುಂಟು. ಆದರೆ ಗದ್ಯಶೈಲಿಯ ಮಾಂತ್ರಿಕತೆ ಮೆಚ್ಚುವಂಥದು. ಈತನೇ ಆಡಿದ ಮಾತುಗಳು ಈತನ ವಾಚಕವರ್ಗದ ಮಿತಿಯನ್ನೂ ಸೂಚಿಸುತ್ತವೆ.	
		
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ